ಎರಡು ಲೋಹಗಳ ಸಂಯೋಜನೆಯಿಂದ ಆದ ಸಂಯುಕ್ತಗಳು (ಮೆಟಾಲಿಕ್ ಕಾಂಪೌಂಡ್ಸ್). ಇವುಗಳಲ್ಲಿ ಎರಡು ವಿಧಗಳುಂಟು. 1. ಎರಡು ವಿಭಿನ್ನ ಲೋಹಗಳ ಸಂಯೋಜನೆಯಲ್ಲಿಯ ಶ್ರೇಢ್ಯಾತ್ಮಕ ಬದಲಾವಣೆ, ಸ್ಫಟಿಕರಚನೆಯಲ್ಲಿ ಭಿನ್ನವಾಗಿರುವ ಪ್ರಾವಸ್ಥೆಗಳ ಶ್ರೇಢಿಯನ್ನು ಒಳಗೊಂಡಿರುವಂಥ ಅಂತರಲೋಹ (ಇಂಟರ್‍ಮೆಟಾಲಿಕ್) ಸಂಯುಕ್ತಗಳು; 2 ಪ್ರಧಾನವಾಗಿ ಗಾತ್ರ ಸಂಬಂಧೀ ಪರಿಣಾಮಗಳಿರುವ  ಅಂತರಾಲೀಯ (ಇಂಟರ್‍ಸ್ಟೀಷಿಯಲ್) ಸಂಯುಕ್ತಗಳು. ದ್ರವರೂಪದ ಎರಡು ಲೋಹಗಳನ್ನು ಬೆರೆಸಿದಾಗ ಅವು ಸಾಧಾರಣವಾಗಿ ಒಂದಲ್ಲೊಂದು ವಿಲೀನವಾಗಿ ಘನರೂಪದ ದ್ರಾವಣಗಳಾಗುತ್ತವೆ. ಹಲವು ಸಂದರ್ಭಗಳಲ್ಲಿ ಈ ರೀತಿ ಬೆರೆತ ಲೋಹಗಳು ಸಂಯುಕ್ತಗಳಾಗುವ ಸಂಭವವೂ ಇರುತ್ತದೆ. ಇಂಥ ಅಂತರಲೋಹ ಸಂಯುಕ್ತಗಳಿಗೆ ಮೂಲ ಲೋಹಗಳೆರಡರಿಂದಲೂ ಬಲುಪಾಲು ಭಿನ್ನವಾಗಿರುವ ಗುಣಗಳಿವೆ.

ಈ ಬಗೆಯ ಸಂಯುಕ್ತಗಳಲ್ಲಿ ಕೇವಲ ಕೆಲವು ಮಾತ್ರ ಸಾಧಾರಣ ರಾಸಾಯನಿಕ ನಿಯಮಗಳಿಗೆ (ವೇಲೆನ್ಸಿ ನಿಯಮಗಳು) ಒಳಪಟ್ಟಿರುತ್ತವೆ. ಉಳಿದ ಅನೇಕ ಸಂಯುಕ್ತಗಳು ರಾಸಾಯನಿಕವಲ್ಲದಂಥ ಇನ್ನಿತರ ನಿಯಮಗಳಿಗೆ ಒಳಪಟ್ಟಿರುವಂತೆ ಕಾಣಿಸುತ್ತವೆ. ಸಂಯೋಜನೆಯಾಗುವ ಎರಡು ಲೋಹಗಳ ವಿದ್ಯುದ್ರಾಸಾಯನಿಕ ಸ್ವಭಾವದಲ್ಲಿ ಅಧಿಕ ಅಂತರವಿದ್ದಾಗ ಮಾತ್ರ ಸಾಧಾರಣ ನಿಯಮಗಳಿಗೆ ಅನುಗುಣವಾಗುವ ಸಂಯುಕ್ತಗಳು ಉಂಟಾಗುತ್ತವೆ. ಉದಾಹರಣೆಗೆ ಸೋಡಿಯಮ್, ಪೊಟ್ಯಾಸಿಯಮ್ ಮೆಗ್ನೀಸಿಯಮ್, ಕ್ಯಾಲ್ಸಿಯಮ್ ಮುಂತಾದ ವೈದ್ಯುತ ಧನ (ಎಲೆಕ್ಟ್ರೋಪಾಜಿಟಿವ್) ಲೋಹಗಳು, ಸಿಲಿಕಾನ್, ಜóರ್ಮೇನಿ ಯಮ್, ಆರ್ಸೆನಿಕ್, ಆಂಟಿಮೊನಿ ಇವು ತಮಗಿಂತಲೂ ಅಧಿಕ ವೈದ್ಯುತ ಋಣ (ಎಲೆಕ್ಟ್ರೊನೆಗೆಟಿವ್) ಗುಣವುಳ್ಳ ಲೋಹಗಳೊಡನೆ ಸಂಯೋಜಿಸಿ ಹೊಂದಿ ಸ್ಥಿರಸಂಯುಕ್ತಗಳಾಗುವ ಗುಣ ಪ್ರದರ್ಶಿಸುತ್ತವೆ. ಮೆಗ್ನೀಸಿಯಮ್ ಲೋಹ ಸೇರಿ ಆಗುವಂಥ ಕೆಲವು ಆದರ್ಶ ಸಂಯುಕ್ತಗಳಿವು : Mg2Si, Mg2Ge, Mg3 As2 ಮತ್ತು Mg3Sb3. ಇವು ಸ್ವಂತ ರಚನೆ ಉಳಿಸಿಕೊಂಡಿರಲು ತಮ್ಮಲ್ಲಿರುವ ಎರಡು ಲೋಹಗಳ ಪ್ರಮಾಣವನ್ನು ಬಲು ಸ್ವಲ್ಪ ಮಾತ್ರವೇ ಬದಲಾಯಿಸಲು ಸಾಧ್ಯ. ಇವು ಅಲ್ಪ ವಿದ್ಯುದ್ವಾಹಕಗಳು. ಇವುಗಳ ಹರಳುಗಳ ರಚನೆ ಲವಣಗಳ ರಚನೆಗೆ ಸಂಬಂಧಿಸಿದೆ. ಈ ಸಂಯುಕ್ತಗಳಿಗೆ ಅಂತರಲೋಹ ಸಂಯುಕ್ತಗಳೆಂದು ಹೆಸರು. 

ಎಲೆಕ್ಟ್ರಾನ್ ಸಂಯುಕ್ತಗಳೆಂಬ ಮತ್ತೊಂದು ಬಗೆಯ ಅಂತರಲೋಹ ಸಂಯುಕ್ತಗಳ ರಚನೆಗಳಿವೆ. ಇವು ವಿದ್ಯುದ್ರಾಸಾಯನಿಕ ಗುಣಗಳಲ್ಲಿ ಹೆಚ್ಚು ವ್ಯತ್ಯಾಸವಿಲ್ಲದ ಲೋಹಗಳಿಂದ ಉಂಟಾಗಿರುವಂಥವು. ಇವು ಸ್ಥಿರವಾಗಿರಲು ಇವುಗಳಲ್ಲಿರಬೇಕಾದ ಮೂಲ ಲೋಹಾಂಶಗಳು ಅನೇಕ ವೇಳೆ ಸರಳ ಪರಮಾಣು ನಿಷ್ಪತ್ತಿಗಳಿಗೆ ಅನುಗುಣವಾಗಿರುತ್ತವೆ. ಇಂಥ ಪರಮಾಣು ನಿಷ್ಪತ್ತಿಗಳಿಗೂ ಸಾಧಾರಣವಾಗಿ ಪ್ರಚಲಿತವಾಗಿರುವ ವೇಲೆನ್ಸಿ ನಿಯಮಗಳಿಗೂ ಯಾವ ರೀತಿಯ ಸರಳ ಸಂಬಂಧವೂ ಇಲ್ಲದಿರಬಹುದು. ಉದಾಹರಣೆಗೆ ತಾಮ್ರ ಮತ್ತು ಸತುವುನಿಂದ, ಮತ್ತು ತಾಮ್ರ ಮತ್ತು ತವರದಿಂದ ಉಂಟಾಗುವ ಸಂಯುಕ್ತಗಳು. ತಾಮ್ರ ಸತವು ಮತ್ತು ತವರಗಳಲ್ಲಿ ಅನುಕ್ರಮವಾಗಿ 1, 2 ಮತ್ತು 4 ವೇಲನ್ಸಿ ಎಲೆಕ್ಟ್ರಾನುಗಳು ಇವೆ. ತಾಮ್ರಕ್ಕೆ ಸತುವು ಅಥವಾ ತವರವನ್ನು ಬೆರೆಸುತ್ತ ಹೋದ ಹಾಗೆಲ್ಲ ಮೊದಲು ಸತುವು ಮತ್ತು ತವರಗಳು ತಾಮ್ರದೊಡನೆ ಬೆರೆತ ದ್ರಾವಣಗಳು ಉಂಟಾಗುತ್ತವೆ. ಹೀಗೆ ಸತುವು ಮತ್ತು ತವರಗಳ ಅಂಶಗಳನ್ನು ಹೆಚ್ಚಿಸುತ್ತ ಹೋದಾಗ ಎರಡು ದ್ರಾವಣಗಳಲ್ಲಿಯ ಲೋಹ ಸಂಯೋಜನೆಗಳು ಅನುಕ್ರಮವಾಗಿ CuZn  ಮತ್ತು Cu5Sn ಆದಾಗ ಎರಡು ಸಂದರ್ಭಗಳಲ್ಲಿಯೂ ಒಂದೇ ರಚನೆಯುಳ್ಳ ಸಂಯುಕ್ತಗಳು ಉಂಟಾಗುತ್ತವೆ. ಇವೆರಡರ ರಚನೆ ವಸ್ತುಕೇಂದ್ರಿತ ಘನ (ಬಾಡಿಸೆಂಟರ್ಡ್ ಕ್ಯೂಬಿಕ್) ರಚನೆಯಂತ್ತಿದ್ದು ಮೊದಲಿನ ದ್ರಾವಣಗಳ ರಚನೆಗಳಿಗಿಂತ ಭಿನ್ನವಾಗಿರುವುದು. ಪ್ರತಿಯೊಂದ ರಲ್ಲಿಯೂ  ಇರುವ ವೇಲೆನ್ಸಿ ಎಲೆಕ್ಟ್ರಾನ್‍ಗಳ ಮತ್ತು ಪರಮಾಣುಗಳ ನಿಷ್ಪತ್ತಿ ಆಗಿರುವುದು ಇವುಗಳಲ್ಲಿ ಕಾಣುವ ಸಾಮಾನ್ಯ ಅಂಶ ಈ ಅಂಶವೇ ಎರಡು ಪ್ರಾವಸ್ಥೆಗಳ (ಫೇಸಸ್) ರಚನೆ ಮತ್ತು ಅವುಗಳ ಮೂಲ ಲೋಹಾಂಶಗಳನ್ನು ನಿರ್ಧರಿಸುತ್ತದೆನ್ನಲಾಗಿದೆ. ಸತುವು ಮತ್ತು ತವರಗಳ ಅಂಶವನ್ನು ಹೆಚ್ಚಿಸುತ್ತ ಹೋದಹಾಗೆಲ್ಲ ವೇಲೆನ್ಸಿ ಎಲೆಕ್ಟ್ರಾನ್ ಮತ್ತು ಪರಮಾಣುಗಳ ನಿಷ್ಪತ್ತಿ 21:13 ಆದಾಗ ಸಂಕೀರ್ಣ  ರಚನೆಯುಳ್ಳ ಮತ್ತೊಂದು ಏಕರೀತಿಯ (ಹೊಮೊಜೀನಿಯಸ್) ಪ್ರಾವಸ್ಥೆ ಉಂಟಾಗುತ್ತದೆ. ಈ ರಚನೆಯುಳ್ಳ ಸಂಯುಕ್ತಗಳು  Cu5Zn8  ಮತ್ತು Cu31Sn8 . ಇವಲ್ಲದೆ CuZn3 ಮತ್ತು Cu3Sn ಸೂತ್ರಗಳ ಇನ್ನೂ ಒಂದು ತೆರನ ಪ್ರಾವಸ್ಥೆಗಳು ವೇಲೆನ್ಸಿ ಎಲೆಕ್ಟ್ರಾನ್ ಮತ್ತು ಪರಮಾಣುಗಳ ನಿಷ್ಪತ್ತಿ 7:4 ಆದಾಗ ಉಂಟಾಗುತ್ತವೆ. ಇಂಥ ಎಲೆಕ್ಟ್ರಾನ್ ಸಂಯುಕ್ತಗಳಲ್ಲಿಯ ಲೋಹಾಂಶಗಳು ಸ್ವಲ್ಪಮಟ್ಟಿಗೆ ಬದಲಾವಣೆ ಗೊಂಡರೂ ತಮ್ಮ ರಚನೆಯಲ್ಲಿ ಯಾವ ವ್ಯತ್ಯಾಸವನ್ನೂ ತೋರದೆ ಸ್ಥಿರವಾಗಿರುವುವು. ಇವು ತಮ್ಮ ಸಾರ್ವತ್ರಿಕ ಗುಣಗಳಲ್ಲಿ ಲೋಹಗಳನ್ನೇ ಹೋಲುತ್ತವೆ, ಅಲ್ಲದೆ  ವಿದ್ಯುದ್ವಾಹಕಗಳಾಗಿಯೂ ವರ್ತಿಸುತ್ತವೆ. 

ವಿದ್ಯುದ್ರಾಸಾಯನಿಕ ವ್ಯತ್ಯಾಸ ಅಥವಾ ಎಲೆಕ್ಟ್ರಾನ್ ಅಂಶಗಳಲ್ಲದೆ ಗಾತ್ರ ಸಂಬಂಧಿ ಪರಿಣಾಮ ಪ್ರಧಾನವಾಗಿರುವ  ಒಂದು ಬಗೆಯ ಸಂಯುಕ್ತಗಳೂ ಇವೆ. ಇವೇ ಅಂತರಾಲೀಯ ಸಂಯುಕ್ತಗಳು. ಈ ಸಂಯುಕ್ತಗಳಲ್ಲಿ ಹೈಡ್ರೊಜನ್, ಬೋರಾನ್, ಕಾರ್ಬನ್ ಮತ್ತು ನೈಟ್ರೊಜನ್ನಿನಂಥ ಅಲ್ಪ ಗಾತ್ರದ ಪರಮಾಣುಗಳು ಲೋಹಜಾಲಕಗಳ (ಮೆಟಲ್ ಲ್ಯಾಟಿಸ್)¬ ತೆರಪುಗಳಲ್ಲಿ (ಇಂಟರ್‍ಸ್ಟೀಸಸ್) ಸಮರ್ಪಕವಾಗಿ ಹೋಗಿ ಹೊಂದಿಕೊಳ್ಳುತ್ತವೆ. ಇದರಿಂದಾಗಿ ಲೋಹಜಾಲಕಗಳು ಬಹುಶ: ಸ್ವಲ್ಪಮಟ್ಟಿಗೆ ವಿಕಾರಗೊಂಡರೂ ಅವುಗಳ ರಚನೆಗಳು ವಾಸ್ತವವಾಗಿ ಹಾಗೆಯೇ ಇರುತ್ತವೆ. ಈ ಸಂಯುಕ್ತಗಳು ತೋರುವ ಲೋಹ ಸದೃಶ ಗುಣಗಳಿಗೆ ಇವುಗಳ  ಲೋಹಸ್ವರೂಪದ ರಚನೆಯೇ ಕಾರಣ. Tac, Tic, ZrC, Mo2N  ಮತ್ತು W2N ಇವು ಕೆಲವು ಉದಾಹರಣೆಗಳು.	

	(ಜಿ.ಕೆ.ಎನ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ